#ಪುಸ್ತಕವಿಮರ್ಶೆ #ಪುಸ್ತಕಪರಿಚಯ #ಕನ್ನಡ #BookIntro #kannada #Books #BookReview #Sarpabhrame
ಕಿಮೇತಯಾ ನೋಪಕೃತಂ ರಜ್ಜ್ವಾ ವಾ ಸರ್ಪಚೇತಸಃ .
ರಜ್ಜುಸ್ವರೂಪಾವಿದುಷೋ ಯೋಽಹಂ ಯದಜಿತೇಂದ್ರಿಯಃ
(ಭಾಗವತ ಹನ್ನೊಂದನೆಯ ಸ್ಕಂಧ - ಹದಿನಾರನೇ ಅಧ್ಯಾಯ - ಪದ್ಯ ಹದಿನೆಂಟು)
ಹಗ್ಗವನು ಹಾವೆಂದು ಭ್ರಮಿಸುತ್ತ ಮರುಳಾಗಿ
ಮುಗ್ಗರಿಸಲದರಲ್ಲಿ ಕೊರೆ ಯಾರದಯ್ಯ?
ಹಗ್ಗವನ್ನರಿಯದಿರೆ ನಾ ಹೆಡ್ಡನಲ್ಲದೆಯೆ
ಅಗ್ಗಳನು ಆದೇನೆ? ಮುದ್ದುರಂಗ
(ನನ್ನ ಭಾವಾನುವಾದ - ಮೂಲದ ಆಶಯಕ್ಕಿಂತ ತೆಳುವಾಗಿದೆ, ಕ್ಷಮೆ ಇರಲಿ! )
ಈಚೆಗೆ, ಅಂದರೆ ಇವತ್ತು ತಾನೇ, ಓದಿ ಮುಗಿಸಿದ ಪುಸ್ತಕ ಎಂ ಆರ್ ದತ್ತಾತ್ರಿ ಅವರ ಕಾದಂಬರಿ ಸರ್ಪಭ್ರಮೆ. ಓದಲು ತೊಡಗಿದರೆ ಪುಸ್ತಕವನ್ನು ಕೆಳಗಿಡಲಾಗದಂತಹ ಪುಸ್ತಕ ಅಂತ ಹೇಳುವುದು ಒಂದು ಸಾಲಿನ ವಿಮರ್ಶೆಯಾಗುತ್ತದೆ. ಆದರೆ ಅದು ಸುಲಭವಾಗಿ ಈ ಕಾದಂಬರಿ ಬಗ್ಗೆ ಮಾಡಬಹುದಾದ ಟಿಪ್ಪಣಿ.
ದತ್ತಾತ್ರಿ ಅವರು ಬೇ ಏರಿಯಾದಲ್ಲಿ ಇದ್ದಾಗಿನಿಂದಲೂ ನಾನು ಅವರನ್ನು ಬಲ್ಲೆ - ನಮ್ಮ ಹೆಚ್ಚಿನ ಮಿತ್ರರಂತೆ ಟೆಕ್ ಉದ್ಯೋಗಿಯಾಗಿದ್ದ ಅವರು ಕಾದಂಬರಿಕಾರರಾಗಿ ಬದಲಾಗಿದ್ದು ಬೆಂಗಳೂರಿಗೆ ತೆರಳಿದಮೇಲೆಯೇ ಅನ್ನಿಸುತ್ತೆ! ಅಥವಾ ಈ ಕಥೆಗಳು ಅವರ ಮನಸ್ಸಿನಲ್ಲಿ ಮೊದಲಿಂದಲೂ ಇದ್ದವೋ ಏನೋ ಗೊತ್ತಿಲ್ಲ. ಸ್ವಲ್ಪ ವಿಲಕ್ಷಣವಾದ ( ಅಂದರೆ, ಸಾಮಾನ್ಯ ಊಹೆಗೆ ತಿಳಿಯದ ಅಂತಷ್ಟೇ ಅರ್ಥ!) ಅಪರೂಪವಾದ ವಿಷಯಗಳನ್ನ ಕಾದಂಬರಿಯ ವಿಷಯಗಳಾಗಿ ಈ ಹಿಂದೆಯೂ ತೆಗೆದುಕೊಂಡಿರುವ ಅವರು ಸರ್ಪಭ್ರಮೆಯಲ್ಲಿ ಕೂಡ ಅಂದೇ ತಂತ್ರವನ್ನ ಬಳಸಿದ್ದಾರೆ.
ಕಥೆಗಾರನೊಬ್ಬ ಜಗತ್ತನ್ನು ನೋಡುವ ಪರಿಯನ್ನ, ಮತ್ತೆ ಅದರಿಂದ ಬಾಳಿನ ಸುಖ ದುಃಖಗಳನ್ನು ಜರಡಿಯಾಡುವ ಒಂದು ವಂದರಿಯನ್ನ ಹೇಗೆ ಗಳಿಸಿಕೊಳ್ಲಬಹುದು, ಅಥವಾ ಗಳಿಸಿಕೊಳ್ಳಬೇಕು ಅನ್ನುವುದನ್ನ ಒಂದು ತಾತ್ತ್ವಿಕವಾಗಿ ತಿಳಿಸುವ ಈ ಕಾದಂಬರಿಯನ್ನ ಆಧ್ಯಾತ್ಮಿಕ ಎನ್ನುವುದೋ ಅಲ್ಲವೋ ತಿಳಿಯುತ್ತಿಲ್ಲ. ಆದರೆ ಅಲೌಕಿಕ ಅನುಭವಗಳಿಂದ ತುಂಬಿದೆ ಅನ್ನುವುದಂತೂ ದಿಟ.
ಕಾದಂಬರಿಯ ಕಥೆಯನ್ನು ನಾನು ಹೇಳಹೋಗುವುದಿಲ್ಲ. ಆದರೆ ಅದರಲ್ಲಿ ಏನಿದೆ ವಿಶೇಷ ಅಂತ ಮಾತ್ರ ತುಸು ಹೇಳಬಹುದು. ಇವರ ಹಿಂದಿನ ಕಾದಂಬರಿ "ಮಸುಕು ಬೆಟ್ಟದ ದಾರಿ" ಯಲ್ಲಿನ ನಾಯಕನಿಗೆ ಇದ್ದ ನೆನಪಿನ ಖಾಯಿಲೆಯ (ಅಥವಾ ಶಕ್ತಿ ಎನ್ನುವುದೇ ?) ರೀತಿಯೇ ಇದರ ಒಂದು ಮುಖ್ಯ ಪಾತ್ರಕ್ಕೂ ಒಂದು ವಿಲಕ್ಷಣ ಶಕ್ತಿ ಇದೆ. ಇವರದೇ ಇನ್ನೊಂದು ಕಾದಂಬರಿ "ತಾರಾಬಾಯಿಯ ಪತ್ರ" ದ ಹಾಗೆ ಇಲ್ಲೂ ಕೂಡ ಹಲವು ಪಾತ್ರಗಳು ತಮ್ಮ ತಮ್ಮ ಮಾತಿನಲ್ಲೇ ಕಥೆ ಹೇಳುತ್ತ ಹೋಗುತ್ತವೆ. "ದ್ವೀಪವ ಬಯಸಿ" ಯಂತೆ, ಇಲ್ಲೂ ಹುಡುಕಾಟವಿದೆ. ಯಾವುದಕ್ಕೆ ಎಂದು ಓದಿಯೇ ತಿಳಿಯಬೇಕು!
ಕತ್ತಲಲ್ಲಿ ಬಿದ್ದ ಹಗ್ಗವನ್ನು ಹಾವೆಂದು ತಿಳಿಯುವುದಕ್ಕೆ ಸರ್ಪಭ್ರಮೆ ಎಂಬ ಪಾರಿಭಾಷಿಕ ಪದವಿದೆ. ನಾವೆಲ್ಲ ನಮ್ಮ ನಮ್ಮ ಜೀವನದ ಹಾದಿಯಲ್ಲಿ ಇಂಥ ಹಾವಿನಂತಿದ್ದ ಹಗ್ಗಗಳನ್ನ ಕಂಡೇ ಇರುತ್ತೇವೆ. ಆದರೆ ಈ ಹಗ್ಗಗಳನ್ನ ಗುರುತಿಸೋದಕ್ಕೆ, ಹಗ್ಗವೆಂದು ಗುರುತಿಸಿ ಮುಂದು ಹೋಗೋದು ಕಷ್ಟಸಾಧ್ಯವೇ. ಅದಕ್ಕೆಂದು ನಮ್ಮೊಳಗೇ ಒಂದು ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತೆ - ಜೀವನದಲ್ಲಿ ಅಂತಹ ಒಂದು ತನ್ನನ್ನೇ ತಾನು ಹುಡುಕಿಕೊಳ್ಳುವ ಒಂದು ಪಯಣದ ಕಥೆಯೇ "ಸರ್ಪಭ್ರಮೆ".
ಕಾದಂಬರಿಯ ಪಾತ್ರಗಳ ಪೋಷಣೆ ಸೊಗಸಾಗಿದೆ. ಕಾದಂಬರಿಯ ಕತೆಗಾರ ಸಂದೀಪ್, ಮತ್ತು ಅವನಿಗೆ ಕತೆ ಹೇಳುವ ಯಾಗಿ ಜೋಯ್ಸ ಇಬ್ಬರ ಜೀವನಾನುಭವಗಳು ಪೂರ್ತಿ ಬೇರೆಬೇರೆಯಾಗಿದ್ದರೂ ಅವರವರ ಹಾದಿ ಒಂದು ಕಡೆ ಸೇರುವುದೂ, ಯಾಗಿಯ ಕಥೆ ನ್ಯಾಯಾನ್ಯಾಯಗಳ ವಿಮರ್ಶೆಯ ನೋಟವನ್ನು ಸಂದೀಪನಿಗೆ ನೀಡುವುದೂ ಕಾದಂಬರಿಯ ಕೊನೆಯಲ್ಲಿ ಊಹಿಸಬಹುದಾದ ಅಂತ್ಯವೇ ಇದ್ದರೂ, ಆ ಬರಹದ ಹೊಳೆ ಹರಿಯುವ ದಾರಿಯ ಕಲ್ಲುಬಂಡೆಗಳು ಮಾತ್ರ ಅನಿರೀಕ್ಷಿತವೇ!
ಕಥೆಯೊಳಗೆ ಕಥೆಯೊಳಗೆ ಕಥೆ ಬರುವ ತಂತ್ರವನ್ನೂ , ಅದೃಶ್ಯ ಪಾತ್ರಗಳಿಂದ ಕಥೆ ಹೇಳಿಸುವ ತಂತ್ರವನ್ನೂ ನಾವು ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ನೋಡಿರುತ್ತೇವೆ. ಅಂತಹ ಒಂದು ಸುಂದರ ಶೈಲಿಯನ್ನು ದತ್ತಾತ್ರಿ ಸರ್ಪಭ್ರಮೆಯಲ್ಲಿ ತಂದಿದ್ದಾರೆ. ಕಾದಂಬರಿಯೊಳಗಿನ ಕಥೆಯಾಗಿ ಬರುವ "ಕಮಲಾ ಮತ್ತು ಕುಞಿಕುಟ್ಟನ್ ನ ಯಕ್ಷಿಣಿ ನಾಣ್ಯ" ಅದರ ಅಲೌಕಿಕ ಘಟನೆಗಳಿಂದ ಬೇರೆಯದೇ ಒಂದು ಕಥೆಯಾಗಿದ್ದರೂ ಬಹಳ ಕುತೂಹಲವಾಗಿ ಓದಿಸಿಕೊಳ್ಳುತ್ತಿತ್ತು! ಅದು ಕಾದಂಬರಿಗೆ ಬಹಳ ಪೂರಕವಾಗಿ ಬೆಳೆದಿದೆ.
ಗಣಿತ, ತತ್ತ್ವಶಾಸ್ತ್ರ, ಅಲೌಕಿಕ ಸಂವೇದನೆ ಮೊದಲಾಗಿ ಹಲವು ವಿಷಯಗಳ ಸುತ್ತ ಮುತ್ತ ಓಡಾಡಿಸುವ ಈ ಕಾದಂಬರಿ ಇತ್ತೀಚಿಗೆ ನಾನು ಓದಿರುವ ಕಾದಂಬರಿಗಳಲ್ಲಿ ಬಹಳ ಮೆಚ್ಚುಗೆಯಾಯಿತು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಈ ಕಾದಂಬರಿಯನ್ನು ನನ್ನ ಓದುಗ ಮಿತ್ರರಿಗೂ ಮೆಚ್ಚುಗೆಯಾಗುತ್ತದೆ ಎಂದು ನನ್ನ ಭಾವನೆ.
#ಪುಸ್ತಕ #ಪರಿಚಯ #ವಿಮರ್ಶೆ #ಕನ್ನಡ #ಕಾದಂಬರಿ #ಸರ್ಪಭ್ರಮೆ